ನೀಲಗಿರಿ ಮರ

	ಮಿರ್ಟೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ವೃಕ್ಷ (ಯೂಕಲಿಪ್ಟಸ್). ಸ್ವಾಭಾವಿಕವಾಗಿ ಆಸ್ಟ್ರೇಲಿಯ, ಟಾಸ್ಮೇನಿಯ, ನ್ಯೂಜಿಲೆಂಡುಗಳಲ್ಲಿ ಬೆಳೆಯುತ್ತದೆ. ಇದರಲ್ಲಿ ಸುಮಾರು 140 ಪ್ರಬೇಧಗಳಿವೆ. ಇವುಗಳ ಪೈಕಿ ಯೂಕಲಿಪ್ಟಸ್, ಗ್ಲಾಬುಲಸ್, ಯೂ. ಮಾರ್ಜಿನೇಟ, ಯೂ. ರೊಬಸ್ಟ, ಯೂ. ಅಮಿಗ್ಡಲಿನ, ಯೂ. ಓಲಿಯೋಸ, ಯೂ. ಸಿಟ್ರಿಯೋಡೊರ ಮುಂತಾದವು ಮುಖ್ಯವಾದವು. ಇವನ್ನು ಪ್ರಪಂಚದ ಇತರ ಕಡೆಗಳಲ್ಲಿಯೂ ಯಶಸ್ವಿಯಾಗಿ ಬೆಳೆಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಇವಕ್ಕೆ ಗಮ್ ಟ್ರೀ ಎಂದು ಹೆಸರಿದೆ. ಭಾರತದಲ್ಲೂ ಇವನ್ನು ಅನೇಕ ಕಡೆಗಳಲ್ಲಿ, ಅನೇಕ ವಾತಾವರಣಗಳಲ್ಲಿ ಬೆಳೆಸಿದ್ದಾರೆ. ಪ್ರಥಮ ಬಾರಿಗೆ ನೀಲಗಿರಿ ಪರ್ವತಗಳಲ್ಲಿ ಇವನ್ನು ಬೆಳೆಸಲಾಯಿತು. ಆದ್ದರಿಂದಲೇ ಇವಕ್ಕೆ ನೀಲಗಿರಿಮರ ಎಂಬ ಹೆಸರು ಬಂತು.

	ನೀಲಗಿರಿ ಮರ ಶೀಘ್ರವಾಗಿ, ಬಹಳ ಎತ್ತರ ಬೆಳೆಯುವ ಮರ. ಟಾಸ್ಮೇನಿಯದಲ್ಲಿ ಒಂದು ಮರ 160 ಮೀ. ಎತ್ತರ ಇದ್ದು 30ಮೀ. ಸುತ್ತಳತೆ ಪಡೆದಿತ್ತು. ಸಾಮಾನ್ಯವಾಗಿ ಇದರ ಎತ್ತರ 150 ಅಡಿಗಳಿಗಿಂತಲೂ ಹೆಚ್ಚಾಗಿರುವುದುಂಟು.

	ನೀಲಗಿರಿ ಮರದ ಪ್ರಭೇದಗಳು ವಿವಿಧ ಪ್ರದೇಶಗಳಲ್ಲಿ ಬೆಳೆಯಬಲ್ಲವು. ಕೆಲವು ಹಿಮಭರಿತ ಪ್ರದೇಶಗಳಲ್ಲಿ ಬೆಳೆಯುತ್ತವೆ. ಕೆಲವು ಅತಿ ಉಷ್ಣ ಪ್ರದೇಶಗಳ ಮತ್ತೆ ಕೆಲವು ಜೌಗುಪ್ರದೇಶಗಳಲ್ಲಿ ಇನ್ನೂ ಕೆಲವು ಮರಳು ಮತ್ತು ಸುಣ್ಣಮಿಶ್ರಿತ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎಲ್ಲ ಪ್ರಭೇದಗಳೂ ನಿತ್ಯಹರಿದ್ವರ್ಣದ ಮರಗಳು. ಕಾಂಡದ ತೊಗಟೆ ಸುಲಿದುಕೊಂಡಿರುವುದು ನೀಲಗಿರಿ ಮರದ ವಿಶಿಷ್ಟ ಲಕ್ಷಣ. ಎಲೆಗಳು ಸರಳ; ಸಾಮಾನ್ಯವಾಗಿ ಕುಡುಗೋಲಿನ ಆಕಾರದವು. ಎಲೆಗಳಲ್ಲಿ ತೈಲ ಗ್ರಂಥಿಗಳುಂಟು. ಹೂಗಳ ಬಣ್ಣ ಬಿಳಿ; ಹೂದಳಗಳು ಟೊಪ್ಪಿಗೆ ಯಾಕಾರದಲ್ಲಿ ಕೂಡಿಕೊಂಡಿರುವುವು. ಹೂ ಅರಳುವಾಗ ಟೊಪ್ಪಿಗೆ ಆಕಾರದಲ್ಲಿಯೇ ಕಳಚಿ ಬೀಳುವುವು. ಕಾಯಿಗಳು ಬುಗುರಿ ಆಕಾರದಲ್ಲಿವೆ. ಕಾಯಿಗಳ ಮೇಲ್ಭಾಗದಲ್ಲಿ ರಂಧ್ರಗಳುಂಟಾಗಿ ಅವುಗಳಿಂದ ಬೀಜಗಳು ಹೊರಬರುತ್ತವೆ. ಬೀಜಗಳು ಅತಿಚಿಕ್ಕವು. ನೀಲಗಿರಿ ಮರವನ್ನು ಬೀಜಗಳ ಸಹಾಯದಿಂದ ಅಭಿವೃದ್ಧಿಪಡಿಸಬಹುದು. ಬೀಜಗಳನ್ನು ಒಟ್ಟಲು ಹಾಕಿ ಸಸಿಗಳನ್ನು ಬೆಳೆಸಲಾಗುತ್ತದೆ. ಸಸಿಗಳು ಬೆಳೆದ ಮೇಲೆ ಬೇಕೆನಿಸಿದ ಕಡೆ ನಾಟಿ ಮಾಡಲಾಗುತ್ತದೆ. ಯೂ. ಮೆಲನೋಫ್ಲೋಯ ಮತ್ತು ಯೂ. ಮೈಕ್ರೊತೀಕ ಮುಂತಾದವು ಮೈದಾನಗಳಲ್ಲಿ ಯಶಸ್ವಿಯಾಗಿ ಬೆಳೆಯುವಂಥ ಮರಗಳು. ಯೂ.ಬೈಕಲರ್, ಯೂ.ಬಾಟ್ರಿಯಾಯ್ಡಿಸ್, ಯೂ. ಯೂಜೆನಾಯ್ಡಿಸ್ ಮುಂತಾದವು ಬೆಟ್ಟಸೀಮೆಗಳಲ್ಲಿ ಹುಲುಸಾಗಿ ಬೆಳೆಯುವಂಥ ಮರಗಳು.

	ನೀಲಗಿರಿ ಮರಗಳನ್ನು ಬೇರೆ ತೆರನ ಮರಗಳು ಬೆಳೆಯದ ಪ್ರದೇಶಗಳಲ್ಲಿಯೂ ಬೆಳೆಸಿ ಆ ಪ್ರದೇಶವನ್ನು ಕಾಡುಗಳನ್ನಾಗಿ ಪರಿವರ್ತಿಸಬಹುದು. ಇವು ಅತಿ ಶೀಘ್ರವಾಗಿ ಬೆಳೆಯುವುದರಿಂದ ಇವುಗಳನ್ನು ವೃದ್ಧಿಸುವುದು ಸುಲಭ. ಅಲ್ಲದೆ ಇವು ಅನೇಕ ಕೆಲಸಗಳಿಗೂ ಒದಗುವುವು. ಇವುಗಳ ಚೌಬೀನೆ ಬಹಳ ಗಟ್ಟಿಯಾದ್ದು, ಭಾರವಾದ್ದು ಮತ್ತು ಬಾಳಿಕೆ ಬರುವಂಥದು. ಆದ್ದರಿಂದ ಸೇತುವೆಗಳ ನಿರ್ಮಾಣಕ್ಕೂ ಫ್ಲೈವುಡ್ ತಯಾರಿಕೆಗೂ ಸೌದೆಗೂ ಇದ್ದಿಲು ತಯಾರಿಕೆಗೂ ಇವನ್ನು ಉಪಯೋಗಿಸುವುದಿದೆ.

	ನೀಲಗಿರಿ ಎಲೆಗಳಿಂದಲೂ ಎಳೆಯ ಕಾಂಡಭಾಗಗಳಿಂದಲೂ ತೈಲವನ್ನು ಪಡೆಯಲಾಗುತ್ತದೆ. ತೈಲವನ್ನು ಆದಿ ಆಸವೀಕರಣ ವಿಧಾನದಿಂದ ತೆಗೆಯುತ್ತಾರೆ. ಯೂ. ಸಿಟ್ರಿಯೋಡೊರ ಪ್ರಭೇದದ ತೈಲ ಅತಿಸುಗಂಧಭರಿತವಾದದ್ದು. ತೈಲದಲ್ಲಿ ಅನೇಕ ಔಷಧಿಗಳಿವೆ. ಇವುಗಳಲ್ಲಿ ಫೆಲಾಂಡ್ರಿನ್ ಮತ್ತು ಪೈಪರಿಟೋನ್ ಎಂಬವು ಮುಖ್ಯವಾದವು. ಅಲ್ಲದೆ ಟರ್ಪಿನಾಲ್, ಸಿಟ್ರೊನೆಲ್ಲಲ್, ಜಿರಾಸಿನೈಲ್ ಅಸಿಟೇಟ್, ಎಂಡೆಸ್ಮಾಲ್ ಮುಂತಾದ ಸುಗಂಧ ರಾಸಾಯನಿಕಗಳು ಇರುವುದರಿಂದ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇದರ ಬಳಕೆ ಹೆಚ್ಚು.

	ಯೂ. ಅಸ್ಟ್ರಿಂಜೆನ್ಸ್ ಮತ್ತು ಯೂ. ರಿಡಂಕ ಪ್ರಭೇದಗಳಲ್ಲಿ ಟ್ಯಾನಿನ್ ಉಂಟು. ಆದ್ದರಿಂದ ಚರ್ಮ ಹದಮಾಡಲು ಇವನ್ನು ಉಪಯೋಗಿಸುವುದಿದೆ. ಯೂ. ರೆನ್ನಾನ್ಸ್ ಪ್ರಭೇದದಿಂದ ಮದ್ಯಸಾರವನ್ನು ತೆಗೆಯಬಹುದು. ಯೂ. ಮನ್ನ ಎಂಬ ಪ್ರಭೇದದಿಂದ ಒಂದು ವಿಧವಾದ ಮಕರಂದ ಸ್ರವಿಸುತ್ತದೆ. ಇದಕ್ಕೆ ಮನ್ನ ಎಂದು ಹೆಸರು. ಬೇಸಿಗೆ ಕಾಲದಲ್ಲಿ ತೊಗಟೆ, ಎಲೆ ಮುಂತಾದವನ್ನು ಚುಚ್ಚಿದಾಗ ಇದು ಹೊರಬಂದು ಹೆಪ್ಪುಗಟ್ಟಿ ಉಂಡೆಯಾಗುತ್ತದೆ. ಇದರಲ್ಲಿ ಶರ್ಕರ ಪದಾರ್ಥಗಳು ಹೇರಳವಾಗಿವೆ.

	ನೀಲಗಿರಿ ಮರದ ಅನೇಕ ಪ್ರಭೇದಗಳಿಂದ ಯೂಕಲಿಪ್ಟಸ್ ಕಿನೊ ಎಂಬ ಗೋಂದನ್ನು ಪಡೆಯಬಹುದು. ಇದನ್ನು ಚರ್ಮ ಹದಗಾರಿಕೆ ಮತ್ತು ಬಣ್ಣದ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸುವರು. ಅಲ್ಲದೆ ಚೌಬೀನೆ ಹಡಗು ನಿರ್ಮಾಣಕ್ಕೆ ಮನೆಗೆಟ್ಟುವುದಕ್ಕೆ, ಟೆಲಿಗ್ರಾಫ್ ಕಂಬಗಳಿಗೆ, ರೈಲ್ವೆ ಸ್ಲೀಪರುಗಳಾಗಿ ಬಳಕೆಯಾಗುತ್ತದೆ. ಇತ್ತೀಚೆಗೆ ಈ ಮರಗಳನ್ನು ರೇಯಾನ್ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಕಾಗದದ ತಯಾರಿಕೆಯಲ್ಲೂ ಇದು ಬಳಕೆಯಲ್ಲಿದೆ. ಸ್ವಾಭಾವಿಕವಾಗಿ ನೀರು ತುಂಬಿಕೊಂಡಿರುವ ಜೌಗುಪ್ರದೇಶವನ್ನು ಒಳ್ಳೆಯ ಫಲವತ್ತಾದ ಭೂಮಿಯಾಗಿ ಮಾರ್ಪಡಿಸಲು ನೀಲಗಿರಿ ಮರಗಳನ್ನು ಬೆಳೆಸುತ್ತಾರೆ. ನದಿಯ ದಂಡೆಗಳಲ್ಲಿಯೂ ಏನೂ ಬೆಳೆಯದ ಪ್ರದೇಶಗಳಲ್ಲಿಯೂ ಗುಡ್ಡಗಾಡುಗಳಲ್ಲಿಯೂ ಇದನ್ನು ಬೆಳೆಸಿ ಭೂಮಿಯ ನೈಸರ್ಗಿಕ ಸ್ವಭಾವವನ್ನು ಬದಲಾಯಿಸಬಹುದು. ಮಣ್ಣಿನ ಸವೆತ ಹಾಗೂ ಗಾಳಿಯ ಹೊಡೆತವನ್ನು ತಡೆಯುವುದಕ್ಕೂ ಇವುಗಳನ್ನು ಬೆಳೆಸಬಹುದು.
(ಎಂ.ಸಿ.ಆರ್.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ